ಶಕ್ತಿಯ ಆಕರಗಳು

ಕೆಲಸ ಮಾಡಲು ಬೇಕಾಗುವ ಸಾಮರ್ಥ್ಯವೇ ಶಕ್ತಿ.

ಯಾವುದೇ ಭೌತ ಅಥವಾ ರಾಸಾಯನಿಕ ಪ್ರಕ್ರಿಯೆಯಲ್ಲಿ ಒಟ್ಟು ಶಕ್ತಿಯು ಸಂರಕ್ಷಣೆಯಾಗಿರುತ್ತದೆ.

ಶಕ್ತಿ ಸಂರಕ್ಷಣಾ ನಿಯಮ:

ಶಕ್ತಿಯನ್ನು ಸೃಷ್ಟಿಸುವುದಕ್ಕಾಗಲಿ ಹಾಗೂ ನಾಶಪಡಿಸಲಿಕ್ಕಾಗಲಿ ಸಾಧ್ಯವಾಗುವುದಿಲ್ಲ. ಶಕ್ತಿಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಪರಿವರ್ತಿಸಬಹುದು.

ಶಕ್ತಿಯ ಉತ್ತಮ ಆಕರಗಳ ಗುಣಲಕ್ಷಣಗಳು:

1. ಪ್ರತಿ ಘಟಕ ಪರಿಮಾಣ ಅಥವಾ ದ್ರವ್ಯರಾಶಿಗೆ ಅತಿ ಹೆಚ್ಚು ಕೆಲಸ ಮಾಡುವುದು.
2. ಸುಲಭವಾಗಿ ದೊರೆಯುವಂತಿರಬೇಕು.
3. ಸುಲಭವಾಗಿ ಸಾಗಿಸಲು ಮತ್ತು ಸಂಗ್ರಹಿಸುವಂತಿರಬೇಕು.
4. ಮಿತವ್ಯಯಕಾರಿಯಾಗಿರಬೇಕು.

ಶಕ್ತಿಯ ಸಾಂಪ್ರದಾಯಿಕ ಆಕರಗಳು:

1. ಪಳೆಯುಳಿಕೆ ಇಂಧನಗಳು: ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳು ಪಳೆಯುಳಿಕೆ ಇಂಧನಗಳು. ಇವು ನವೀಕರಿಸಲಾಗದ ಶಕ್ತಿಯ ಆಕರಗಳು, ಆದ್ದರಿಂದ ಅವುಗಳನ್ನು ಸಂರಕ್ಷಿಸಬೇಕು. ಈ ಇಂಧನಗಳನ್ನು ನಾವು ಮಿತಿಮೀರಿ ಬಳಸಿದರೆ ನಮಗೆ ಶಕ್ತಿಯ ಆಕರಗಳ ಕೊರತೆ ಉಂಟಾಗುತ್ತದೆ. ಪಳೆಯುಳಿಕೆ ಇಂಧನಗಳ ದಹಿಸುವಿಕೆಯಿಂದ ಕಾರ್ಬನ್ , ನೈಟ್ರೋಜನ್ ಮತ್ತು ಸಲ್ಫರ್ ಗಳ ಆಕ್ಸೈಡ್ ಗಳು ಬಿಡುಗಡೆಯಾಗಿ ವಾಯುಮಾಲಿನ್ಯ, ಆಮ್ಲಮಳೆ ಉಂಟಾಗುವುದರೊಂದಿಗೆ ನೀರು ಮತ್ತು ಮಣ್ಣಿನ ಮೇಲೆ ಪರಿಣಾಮ ಬೀರುತ್ತದೆ.
2. ಉಷ್ಣ ವಿದ್ಯುತ್ ಸ್ಥಾವರ: ಪಳೆಯುಳಿಕೆ ಇಂಧನಗಳನ್ನು ದಹಿಸಿ ನೀರನ್ನು ಕಾಯಿಸಿ, ಅದರಿಂದ ಬರುವ ಹಬೆಯಿಂದ ಟರ್ಬೈನ್ ಚಲಿಸಿ, ವಿದ್ಯುತ್ ಉತ್ಪಾದಿಸಲಾಗುತ್ತದೆ.
3. ಜಲ ವಿದ್ಯುತ್ ಸ್ಥಾವರ: ಮಳೆ ನೀರನ್ನು ಅಣೆಕಟ್ಟುಗಳಲ್ಲಿ ಸಂಗ್ರಹಿಸಿ, ಎತ್ತರದ ಹಂತದಲ್ಲಿರುವ ನೀರನ್ನು ಕೊಳವೆಗಳ ಮೂಲಕ, ಜಲಾಶಯದ ತಳಲ್ಲಿರುವ ಟರ್ಬೈನ್ ಚಲಿಸಿ, ವಿದ್ಯುತ್ ಉತ್ಪಾದಿಸಲಾಗುತ್ತದೆ.

ಜಲವಿದ್ಯುತ್ ಉತ್ಪಾದನೆಯ ಅನಾನುಕೂಲಗಳು:

1. ಅಣೆಕಟ್ಟು ನಿರ್ಮಾಣ ಕೆಲವೇ ನಿರ್ದಿಷ್ಟ ಸ್ಥಳಗಳಲ್ಲಿ ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಮಾತ್ರ ಕಟ್ಟಬಹುದು.
2. ಅಣೆಕಟ್ಟುಗಳ ನಿರ್ಮಾಣದಿಂದ ವಿಶಾಲವಾದ ವ್ಯವಸಾಯ ಯೋಗ್ಯ ಭೂಮಿ, ಮಾನವ ವಾಸ ಯೋಗ್ಯ ಪ್ರದೇಶಗಳು ಮುಳುಗಡೆಯಾಗುತ್ತದೆ.
3. ಅಣೆಕಟ್ಟಿನ ನೀರಿನಲ್ಲಿ ಮುಳುಗಡೆಯಾಗುವುದರಿಂದ ಪರಿಸರ ವ್ಯವಸ್ಥೆಯು ನಾಶವಾಗುತ್ತದೆ.
4. ಜಲಾಶಯಗಳಲ್ಲಿ ಮುಳುಗಡೆಯಾದ ಸಸ್ಯರಾಶಿಯು ಆಕ್ಸಿಜನ್ ರಹಿತ ಸ್ಥಿತಿಯಲ್ಲಿ ಕೊಳೆತು ಅಪಾರ ಪ್ರಮಾಣದ ಹಸಿರು ಮನೆ ಅನಿಲ ಮೀಥೇನ್ ಬಿಡುಗಡೆಯಾಗುತ್ತದೆ.
5. ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪುನರ್ವಸತಿ ಸಮಸ್ಯೆ ಉಂಟಾಗುತ್ತದೆ.

ಜೈವಿಕ ಶಕ್ತಿ

ಸಸ್ಯ ಅಥವಾ ಪ್ರಾಣಿ ಉತ್ಪನ್ನಗಳನ್ನು ಇಂಧನಗಳ ಮೂಲವಾಗಿ ಬಳಸುವಿಕೆಯೇ ಜೈವಿಕ ಶಕ್ತಿ.
ಈ ಇಂಧನದ ಆಕರವೇ ಜೈವಿಕ ರಾಶಿ.
ಉದಾ: ಬೆರಣಿ, ಜೈವಿಕ ಅನಿಲ ಸ್ಥಾವರ

ಜೈವಿಕ ಅನಿಲ ಸ್ಥಾವರ

1. ಮಿಶ್ರಣ ತೊಟ್ಟಿ: ಸಗಣಿ ಮತ್ತು ನೀರಿನ ಮಿಶ್ರಣ (ಬಗ್ಗಡ) ಹೊಂದಿರುವ ತೊಟ್ಟಿ.
2. ಪಾಚಕ ಕೋಣೆ: ಆಕ್ಸಿಜನ್ ರಹಿತ ಮೊಹರಾದ ಕೋಣೆ. ಆಕ್ಸಿಜನ್ ರಹಿತ ಉಸಿರಾಟ ನಡೆಸುವ ಸೂಕ್ಷ್ಮಜೀವಿಗಳು ಸಗಣಿ ಬಗ್ಗಡದಲ್ಲಿರುವ ಸಂಕೀರ್ಣ ಸಂಯುಕ್ತಗಳನ್ನು ವಿಘಟಿಸುತ್ತದೆ. ವಿಘಟನಾ ಕ್ರಿಯೆ ಪೂರ್ಣಗೊಂಡ ನಂತರ ಮೀಥೇನ್, ಕಾರ್ಬನ್ ಡೈ ಆಕ್ಸೈಡ್, ಹೈಡ್ರೋಜನ್ ಮತ್ತು ಹೈಡ್ರೋಜನ್ ಸಲ್ಫೈಡ್ ಉತ್ಪತ್ತಿಯಾಗುತ್ತದೆ.
3. ಅನಿಲ ಹೊರ ಕವಾಟ: ಉತ್ಪತ್ತಿಯಾದ ಅನಿಲವನ್ನು ಜೈವಿಕ ಸ್ಥಾವರದಿಂದ ಹೊರ ತರಲು ಸಹಾಯಕ.

ಜೈವಿಕ ಅನಿಲದ ಅನುಕೂಲಗಳು:

ಜೈವಿಕ ಅನಿಲದ ಅನುಕೂಲಗಳು: 1. ಸೌದೆ, ಇದ್ದಿಲು, ಕಲ್ಲಿದ್ದಲು ಉರಿಸಿದಾಗ ಬೂದಿ ಉಳಿಯುವಂತೆ ಶೇಷ ಉಳಿಯುವುದಿಲ್ಲ. ಜೈವಿಕ ಅನಿಲ ಹೊಗೆ ರಹಿತವಾಗಿ ಉರಿಯುತ್ತದೆ.
2. ಇತರೆ ಇಂಧನಕ್ಕೆ ಹೋಲಿಸಿದರೆ ಇದರ ಶಾಖ ಮತ್ತು ದಕ್ಷತೆ ಹೆಚ್ಚು.
3. ಜೈವಿಕ ಅನಿಲ ಸ್ಥಾವರ ಸ್ಥಾಪನೆಯ ಉಳಿಕೆಯ ಬಗ್ಗಡವನ್ನು ನಿಯತ ಕಾಲಾನುಸಾರ ಹೊರತೆಗೆದು ಅತ್ಯುತ್ತಮ ಗೊಬ್ಬರವಾಗಿ ಬಳಸಬಹುದು.
4. ಈ ಜೈವಿಕ ಗೊಬ್ಬರದಲ್ಲಿ ಹೆಚ್ಚಿನ ರಂಜಕ ಮತ್ತು ನೈಟ್ರೋಜನ್ ಹೊಂದಿದ್ದು ಸಸ್ಯಗಳಿಗೆ ಉಪಯುಕ್ತವಾಗಿದೆ.

ಸೂರ್ಯನ ಶಾಖದ ಅಸಮಾನ ಕಾಸುವಿಕೆಯಿಂದ ಉಂಟಾದ ಗಾಳಿಯ ಚಲನೆಯಿಂದ ಮಾರುತಗಳು ಉಂಟಾಗುತ್ತದೆ.

ಮಾರುತ ಶಕ್ತಿಯ ಉಪಯೋಗಗಳು:

1. ಗಾಳಿಯಂತ್ರದ ಚಕ್ರೀಯ ಚಲನೆಯನ್ನು ಉಂಟುಮಾಡಿ ಬಾವಿಯಿಂದ ನೀರೆತ್ತಲು ಬಳಸಲಾಗುತ್ತದೆ.
2. ಯಾಂತ್ರಿಕ ಕಾರ್ಯಗಳನ್ನು ಮಾಡಲು ಬಳಸಲಾಗುತ್ತದೆ.
3. ವಿದ್ಯುತ್ ಉತ್ಪಾದನೆ ಮಾಡಲು ಬಳಸಲಾಗುತ್ತದೆ.

ಪವನ ಶಕ್ತಿ

ಗಾಳಿಯಂತ್ರದ ಚಕ್ರೀಯ ಚಲನೆಯನ್ನು ಬಳಸಿ ವಿದ್ಯುತ್ ಜನರೇಟರ್ ನ ಟರ್ಬೈನ್ ಸುತ್ತಿಸಿ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುವುದೇ ಪವನ ಶಕ್ತಿ.

ಗಾಳಿ ಯಂತ್ರ ಸ್ಥಾಪನೆಯ ಮಿತಿಗಳು:

1. ಪವನ ಕ್ಷೇತ್ರಗಳನ್ನು ವರ್ಷದ ಹೆಚ್ಚಿನ ಕಾಲ ಎಲ್ಲಿ ಮಾರುತಗಳು ಬೀಸುತ್ತವೆಯೋ ಅಂತಹ ಸ್ಥಳದಲ್ಲಿ ಸ್ಥಾಪಿಸಬೇಕು.
2. ಟರ್ಬೈನ್ ಗಳ ಜವವನ್ನು ನಿರ್ವಹಿಸಲು ಗಾಳಿಯ ಜವವು 15 ಕಿ.ಮೀ./ಗಂಟೆಗಿಂತ ಹೆಚ್ಚಾಗಿರಬೇಕು.
3. ಅವಶ್ಯವಿರುವ ಸಂಗ್ರಾಹಕ ಕೋಶಗಳಂತಹ ಪೂರಕ ಮೂಲ ಸೌಕರ್ಯಗಳು ಬೇಕು.
4. ಮಾರುತವಿಲ್ಲದ ಅವಧಿಯಲ್ಲಿ ವಿದ್ಯುಚ್ಛಕ್ತಿ ಸರಬರಾಜಿಗೆ ಪರ್ಯಾಯ ವ್ಯವಸ್ಥೆ ಬೇಕು.
5. ಮಾರುತಕ್ಷೇತ್ರಗಳ ಸ್ಥಾಪನೆಗೆ ಅಗಾಧವಾದ ಜಾಗದ ಅವಶ್ಯಕತೆ ಇದೆ.
6. ಮಾರುತ ಕ್ಷೇತ್ರಗಳ ಸ್ಥಾಪನಾ ವೆಚ್ಚ ಹೆಚ್ಚು.
7. ಗೋಪುರ ಮತ್ತು ರೆಕ್ಕೆಗಳನ್ನು ಪ್ರಕೃತಿಯ ಅನಿಶ್ಚಿತ ಪರಿಣಾಮಗಳಾದ ಮಳೆ, ಸೂರ್ಯ, ಬಿರುಗಾಳಿ ಮುಂತಾದವುಗಳಿಂದ ರಕ್ಷಿಸಲು ಉನ್ನತ ನಿರ್ವಹಣೆಯ ಅವಶ್ಯಕತೆಯಿದೆ.

ಸೌರ ಶಕ್ತಿ:

ಸೂರ್ಯನಿಂದ ಬರುವ ಬೆಳಕು ಮತ್ತು ಶಾಖ ರೂಪದ ಶಕ್ತಿಯನ್ನು ಇಂಧನದ ಮೂಲವಾಗಿ ಬಳಸುವುದಕ್ಕೆ ಸೌರಶಕ್ತಿ ಎನ್ನುವರು.

ಸೌರಶಕ್ತಿ ಸಾಧನಗಳು:

1. ಸೌರಕುಕ್ಕರ್ ಮತ್ತು ಸೌರ ಜಲತಾಪಕಗಳು (ಸೂರ್ಯನ ಶಾಖವನ್ನು ಇಂಧನವಾಗಿ ಬಳಸುವರು.)
2. ಸೌರಕೋಶ (ಸೂರ್ಯನ ಬೆಳಕನ್ನು ಇಂಧನವಾಗಿ ಬಳಸುವರು.)

ಸೌರ ಕೋಶ:

ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಸಾಧನ.

ಸೌರಕೋಶದ ಅನುಕೂಲಗಳು:

• ಚಲನಶೀಲ ಭಾಗಗಳನ್ನು ಹೊಂದಿಲ್ಲ.
• ಕಡಿಮೆ ನಿರ್ವಹಣೆ ಹಾಗೂ ಯಾವುದೇ ಕೇಂದ್ರೀಕರಿಸುವ ಸಾಧನದ ಸಹಾಯವಿಲ್ಲದೆ ತೃಪ್ತಿಕರವಾಗಿ ಕಾರ್ಯ ನಿರ್ವಹಿಸುತ್ತದೆ.
• ವಿದ್ಯುತ್ ಪ್ರಸರಣ ತಂತಿ ಅಳವಡಿಸಲು ಸಾಧ್ಯವಾಗದ ದುರ್ಗಮ ಪ್ರದೇಶ, ತಂತಿ ಅಳವಡಿಸಲು ಹೆಚ್ಚು ಖರ್ಚಾಗುವ ಪ್ರದೇಶ, ವ್ಯವಾಹಾರಿಕವಾಗಿ ಲಾಭದಾಯಕವಲ್ಲದ ಪ್ರದೇಶಗಳಲ್ಲಿ ಈ ಸೌರ ಕೋಶ ಸರಣಿ (ಸೌರ ಫಲಕ) ಗಳನ್ನು ಅಳವಡಿಸಬಹುದು.

ಸೌರಕೋಶಗಳ ವೈಜ್ಞಾನಿಕ ಹಾಗೂ ತಾಂತ್ರಿಕ ಅನ್ವಯಗಳು:

* ಕೃತಕ ಉಪಗ್ರಹಗಳ ಹಾಗೂ ಬಾಹ್ಯಾಕಾಶ ಸಂಶೋಧನೆಗಳಲ್ಲಿ ಬಳಸುವರು.
* ರೇಡಿಯೋ ಅಥವಾ ತಂತಿರಹಿತ ಸಂಪರ್ಕ ವ್ಯವಸ್ಥೆಗಳಲ್ಲಿ ಸೌರಕೋಶ ಬಳಸುತ್ತಾರೆ.
* ದೂರದರ್ಶನ ಪ್ರಸಾರ ಕೇಂದ್ರಗಳಲ್ಲಿ ಸೌರಫಲಕಗಳನ್ನು ಬಳಸುವರು.
* ಸಂಚಾರ ದೀಪಗಳು, ಟ್ರಾಫಿಕ್ ದೀಪಗಳು, ಕ್ಯಾಲ್ಕುಲೇಟರ್ ಗಳಲ್ಲಿ, ಹಲವಾರು ಆಟಿಕೆಗಳಲ್ಲಿ ಬಳಸುವರು.

ಉಬ್ಬರ ಶಕ್ತಿ:

ಚಂದ್ರನ ಗುರುತ್ವಾಕರ್ಷಣೆಯು ಸುತ್ತುತ್ತಿರುವ ಭೂಮಿಯ ಮೇಲೆ ವರ್ತಿಸುವುದರಿಂದ, ಸಮುದ್ರದ ನೀರಿನ ಮಟ್ಟದಲ್ಲಿ ಏರಿಳಿತ ಉಂಟಾಗುತ್ತದೆ. ಈ ವಿದ್ಯಮಾನವನ್ನು ಉನ್ನತ ಉಬ್ಬರ ಮತ್ತು ಇಳಿತ ಎನ್ನುವರು.

ಸಾಗರ ಉಷ್ಣ ಶಕ್ತಿ:

ಸಮುದ್ರದ ಮೇಲ್ಮೈನಲ್ಲಿರುವ ನೀರು ಸೂರ್ಯನ ಶಾಖದಿಂದ ಬಿಸಿಯಾದರೂ ಸಮುದ್ರದಾಳದ ನೀರು ತುಲನಾತ್ಮಕವಾಗಿ ತಣ್ಣಗಿರುತ್ತದೆ. ತಾಪಮಾನದ ( ಸುಮಾರು 20 ಕೆಲ್ವಿನ್ & ಅದಕ್ಕಿಂತ ಹೆಚ್ಚು) ಈ ವ್ಯತ್ಯಾಸವನ್ನು ಬಳಸಿ ಅಮೋನಿಯಾದಂತಹ ಆವಿಶೀಲ ದ್ರವವನ್ನು ಕುದಿಸಿ, ಈ ಆವಿಯನ್ನು ವಿದ್ಯುಜ್ಜನಕದ ಟರ್ಬೈನ್ ತಿರುಗಿಸಿ ವಿದ್ಯುತ್ ಉತ್ಪಾದಿಸುತ್ತಾರೆ. ಸಾಗರ ಉಷ್ಣಶಕ್ತಿ ಪರಿವರ್ತನಾ ಸ್ಥಾವರದಲ್ಲಿ ಶಕ್ತಿ ಪಡೆಯಲು ಬಳಸುವರು.

ಅಲೆಗಳ ಶಕ್ತಿ:

ಸಮುದ್ರದ ಮೇಲೆ ಬೀಸುವ ಮಾರುತಗಳಿಂದ ಅಲೆಗಳು ಉಂಟಾಗುತ್ತದೆ. ಸಮುದ್ರದ ಅಲೆಗಳು ಹೊಂದಿರುವ ಚಲನಶಕ್ತಿಯಿಂದ ವಿದ್ಯುಚ್ಛಕ್ತಿ ತಯಾರಿಸಬಹುದು. ಮಿತಿ: ಬಲಿಷ್ಟ ಅಲೆಗಳು ಇದ್ದಲ್ಲಿ ಮಾತ್ರ ಅಲೆಗಳ ಶಕ್ತಿಯ ಸಮರ್ಥ ಶಕ್ತಿಯ ಆಕರವಾಗುತ್ತದೆ.

ಭೂಗರ್ಭ ಉಷ್ಣ ಶಕ್ತಿ:

ಉಷ್ಣತಾಣಗಳು: ಭೂಗರ್ಭ ಪ್ರಕ್ರಿಯೆಗಳಿಂದಾಗಿ, ಭೂಮಿಯ ಆಳದ ಬಿಸಿಯಾದ ಪ್ರದೇಶದಲ್ಲಿ ಉಂಟಾದ ದ್ರವಿತ ಶಿಲಾಪಾಕವು ಮೇಲ್ಮುಖವಾಗಿ ತಳ್ಳಲ್ಪಟ್ಟು ನಿರ್ದಿಷ್ಟ ಪ್ರದೇಶಗಳಲ್ಲಿ ಸೆರೆಯಾದ ಭಾಗಗಳು.

ಬಿಸಿ ನೀರಿನ ಬುಗ್ಗೆಗಳು:

ಅಂರ್ತಜಲವು ಉಷ್ಣ ತಾಣಗಳ ಸಂಪರ್ಕಕ್ಕೆ ಬಂದಾಗ ಈ ಭಾಗದ ನೀರು ಮೇಲ್ಮೈ ಮೇಲಿನ ಹೊರಕುಳಿಗಳ ಮೂಲಕ ಹೊಮ್ಮುತ್ತದೆ. ಇದನ್ನು ಬಿಸಿ ನೀರಿನ ಬುಗ್ಗೆಗಳು ಎನ್ನುವರು.

ಉಷ್ಣ ತಾಣಗಳ ಕಲ್ಲುಗಳ ಸಂಧಿಯಲ್ಲಿರುವ ಆವಿಯನ್ನು ಕೊಳವೆ ಮೂಲಕ ಟರ್ಬೈನ್ ಗೆ ಹಾಯಿಸಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ರೀತಿಯ ಉಷ್ಣ ಸ್ಥಾವರಗಳು ನ್ಯೂಜಿಲ್ಯಾಂಡ್ ಮತ್ತು ಅಮೇರಿಕಾ ಗಳಲ್ಲಿದೆ.

ನ್ಯೂಕ್ಲೀಯರ್ ಶಕ್ತಿ:

ಪರಮಾಣು ವಿದಳನ ಕ್ರಿಯೆಯಲ್ಲಿ ಭಾರಿ ಪರಮಾಣು ಬೀಜವನ್ನು ಕಡಿಮೆ ಶಕ್ತಿಯ ನ್ಯೂಟ್ರಾನ್ ನಿಂದ ತಾಡಿಸಿದಾಗ ಹಗುರ ಬೀಜಗಳಾಗಿ ವಿಭಜನೆ ಹೊಂದಿ ಅಗಾಧವಾದ ಶಕ್ತಿ ಬಿಡುಗಡೆಯಾಗುತ್ತದೆ ಈ ಶಕ್ತಿಯನ್ನು ನ್ಯೂಕ್ಲೀಯರ್ ಶಕ್ತಿ ಎನ್ನುವರು.